ಡಾ. ಎಚ್. ಗಿರಿಜಮ್ಮ ಒಬ್ಬರು ವೈದ್ಯೆ ಹಾಗೂ ಕನ್ನಡ ಸಾಹಿತಿ. ಹಲವು ಕಥಾಸಂಕಲನಗಳನ್ನು, ವೈದ್ಯವಿಜ್ಞಾನ ಕೃತಿಗಳನ್ನು ರಚಿಸಿದವರು. ಸಾಹಿತ್ಯ ಕ್ಷೇತ್ರದಲ್ಲಷ್ಟೇ ಅಲ್ಲದೆ ಚಲನಚಿತ್ರ, ಸಾಕ್ಷ್ಯಚಿತ್ರಗಳ ಬರೆವಣಿಗೆ, ನಿರ್ಮಾಣಗಳಲ್ಲಿ ಕೂಡ ತೊಡಗಿಸಿಕೊಂಡಿದ್ದರು. == ಜೀವನ == ಇವರು ಹರಿಹರದಲ್ಲಿ ಜನಿಸಿದರು. ಪಿಯುಸಿವರೆಗೆ ದಾವಣಗೆರೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಹರಿಹರದಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಿದರು. ಅನಂತರ ಬೆಂಗಳೂರಿನಲ್ಲಿ ವೃತ್ತಿಜೀವನವನ್ನು ಮುಂದುವರೆಸಿದರು. ೨೦ಕ್ಕೂ ಹೆಚ್ಚು ವರ್ಷಗಳ ಕಾಲ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದರು. == ವೃತ್ತಿ ಪ್ರವೃತ್ತಿ == ವೃತ್ತಿಯಿಂದ ವೈದ್ಯೆಯಾಗಿದ್ದು ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆಯಾಗಿದ್ದರು. ಪ್ರವೃತ್ತಿಯಿಂದ ಸಾಹಿತ್ಯ, ಚಲನಚಿತ್ರ, ಸಾಕ್ಷ್ಯಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ೧೫ ಟೆಲಿಫಿಲ್ಮ್‌ಗಳು, ೫ ಟೆಲಿ ಧಾರಾವಾಹಿಗಳು ಮತ್ತು ೧೦ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ. 'ಪಂಚವಟಿ', 'ಗಾಜಿನ ಮನೆ', 'ಮೇಘ ಮಲ್ಹಾರ' ಸಿನೆಮಾಗಳಿಗೆ ಕತೆ ಬರೆದಿದ್ದಾರೆ.'ಅಂತರಗಂಗೆ' ಎಂಬ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. == ಸಾಹಿತ್ಯ == ಹಲವು ವಾರಪತ್ರಿಕೆ, ಮಾಸಪತ್ರಿಕೆಗಳಲ್ಲಿ ಕತೆಗಳನ್ನು, ನೀಳ್ಗತೆಗಳನ್ನು ಬರೆದಿದ್ದಾರೆ. ಅವರು ಒಟ್ಟು ೫೦ ಕತೆಗಳನ್ನು, ಹದಿನೇಳು ಕಾದಂಬರಿ, ಒಂಭತ್ತು ಕಥಾ ಸಂಕಲನ, ಹತ್ತೊಂಬತ್ತು ವೈದ್ಯ ವಿಜ್ಞಾನದ ಕೃತಿಗಳನ್ನು ಬರೆದು ಪ್ರಕಟಿಸಿದ್ದಾರೆ. (ಕೆಳಗಿನದು ಅಪೂರ್ಣ ಪಟ್ಟಿ) === ಕಾದಂಬರಿಗಳು === ಮೇಘ ಮಂದಾರ (ಈ ಕಾದಂಬರಿಯು ಚಲನಚಿತ್ರವಾಗಿದೆ. ೧೯೯೨) ಚಂದಮಾಮ ತಮಸೋಮ ಜ್ಯೋತಿರ್ಗಮಯ ಅಂಬರತಾರೆ ಬೆಂಕಿಹೂ === ಕಥಾಸಂಕಲನಗಳು === ಬಿರುಕು ಆಯ್ದ ಕತೆಗಳು ಸಂಜೆ ಮಲ್ಲಿಗೆ === ವೈದ್ಯ ವಿಜ್ಞಾನ ಕೃತಿಗಳು === ನಿಮ್ಮ ಮಗು ಸ್ತ್ರೀ ದೇಹ ಬಸಿರು ಬಂಜೆತನ ಮತ್ತು ಪರಿಹಾರೋಪಾಯಗಳು ಬಂಜೆತನದ ಬವಣೆಗಳು ಮಕ್ಕಳು ಮನಸ್ಸು ಮತ್ತು ಬೆಳವಣಿಗೆ ಮಕ್ಕಳು-ಮನಸು ಸಂತಾನಹೀನತೆ ಗರ್ಭಕೋಶದ ಖಾಯಿಲೆಗಳಿಗೆ ಚಿಕಿತ್ಸೆ ಮನುಷ್ಯ ದೇಹ ಮತ್ತು ಆರೋಗ್ಯ (ಡಾ. ಪೂರ್ಣಿಮಾ ಭಟ್ ಸಹಲೇಖಕಿ) ರಕ್ತದ ಕಾಯಿಲೆಗಳು === ಆತ್ಮಕಥನ === ಕಾಡತಾವ ನೆನಪುಗಳು == ಪ್ರಶಸ್ತಿ ಗೌರವಗಳು == ರಾಜ್ಯೋತ್ಸವ ಪ್ರಶಸ್ತಿ - ೨೦೧೪ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - ೨೦೦೬ ಅತ್ತಿಮಬ್ಬೆ ಪ್ರಶಸ್ತಿ ಬಿ. ಸರೋಜಾದೇವಿ ದತ್ತಿನಿಧ ಪ್ರಶಸ್ತಿ ವಿಶ್ವೇಶ್ವರಾಯ ಪ್ರಶಸ್ತಿ ಕನ್ನಡ ಲೇಖಕಿಯರ ಸಂಘದ ಅನುಪಮಾ ಪ್ರಶಸ್ತಿ ಡಾ. ಪಿ.ಇ ಎಸ್‌. ಶಂಕರ್‌ ಪ್ರತಿಷ್ಠಾನದ ‘ಶ್ರೇಷ್ಠ ವೈದ್ಯ’ ಸಾಹಿತಿ ಪ್ರಶಸ್ತಿ == ನಿಧನ == ೧೭ಆಗಸ್ಟ್ ೨೦೨೧ ರಂದು ದಾವಣಗೆರೆಯಲ್ಲಿ ನಿಧನರಾದರು. ಅವರಿಗೆ ೭೦ ವರ್ಷ ವಯಸ್ಸಾಗಿತ್ತು. == ಉಲ್ಲೇಖಗಳು == == ಹೊರಕೊಂಡಿಗಳು == ಡಾ. ಎಚ್. ಗಿರಿಜಮ್ಮ - ಬುಕ್ ಬ್ರಹ್ಮ ಚಿಲುಮೆ ಅಂತರಜಾಲ ತಾಣದಲ್ಲಿರುವ ಡಾ. ಎಚ್. ಗಿರಿಜಮ್ಮರ ಬರಹಗಳು ‘ಆತ್ಮಕಥನದ ಮುಖಪುಟದಲ್ಲಿ ನನ್ನ ಫೋಟೋ ಮಸುಕಾಗಿಯೇ ಇರಲಿ’